ಕೆಂಬೂತ
	ಕ್ಯುಕಲಿಫಾರ್ಮಿಸ್ ಗಣ, ಕ್ಯುಕಲಿಡೀ ಕುಟುಂಬ ಹಾಗೂ ಸೆಂಟ್ರೋಪೋಡಿನೀ ಉಪಕುಟುಂಬಕ್ಕೆ ಸೇರಿದ ಹಕ್ಕಿ (ಕ್ರೋ ಫೆಸಂóಟ್ ಅಥವಾ ಕೂಕಲ್). ಶಾಸ್ತ್ರೀಯ ನಾಮ ಸೆಂಟ್ರೋಪಸ್ ಸೈನೆನ್ಸಿಸ್. ಭಾರತ. ಶ್ರೀಲಂಕ, ಪಾಕಿಸ್ತಾನ ಮತ್ತು ಬರ್ಮ(ಇಂದಿನ ಮಾಯನ್ಮಾರ್)ಗಳ ಕುರುಚಲು ಕಾಡುಗಳಲ್ಲಿ ಜನವಸತಿಯ ನೆರೆಯಲ್ಲಿರುವ ತೋಪುಗಳಲ್ಲಿ ವಾಸಿಸುತ್ತದೆ. ಸಾಂಬಾರ ಕಾಗೆ ಎಂದೂ ಹೆಸರಿದೆ. ಇದೇ ಜಾತಿಗೆ ಸೇರಿದ ಇನ್ನೂ ಕೆಲವು ಪ್ರಭೇದಗಳು ಆಫ್ರಿಕ, ಆಸ್ಟ್ರೇಲಿಯ, ಮಡಗಾಸ್ಕರ್ ದ್ವೀಪಗಳಲ್ಲಿ ಕಾಣಬರುತ್ತವೆ. ಭಾರತದ ಪಶ್ಚಿಮ ಘಟ್ಟಗಳಲ್ಲಿ ಸಣ್ಣ ಕೆಂಬೂತ (ಸೆಂಟ್ರೋಪಸ್ ಬೆಂಗಾವೆನ್ಡಸಿಸ್) ಕಂಡುಬಂದರೆ, ಹಸುರು ಕೊಕ್ಕಿನ ಕೆಂಬೂತ ಶ್ರೀಲಂಕಾದಲ್ಲಿ ಕಂಡುಬರುತ್ತದೆ. ಶ್ರೀಲಂಕಾಕ್ಕೆ ಸೀಮಿತವಾಗಿದೆ ಇದರ ಹರವು. ಇದೊಂದು ಅಪಾಯದಂಚಿನಲ್ಲಿರುವ ಪ್ರಭೇದ. ಗಾತ್ರದಲ್ಲಿ ಕಾಗೆಗಿಂತ ಕೊಂಚ ದೊಡ್ಡದಾದ ಒಡ್ಡೊಡ್ಡಾದ ಹಕ್ಕಿಯಿದು. ನುಣುಪಾಗಿಯೂ ಆಚ್ಚ ಕಪ್ಪಾಗಿಯೂ ಹೊಳೆಯುವ ದೇಹ, ಕೆಂಗಂದು ಬಣ್ಣದ ರೆಕ್ಕೆಗಳು, ಉದ್ದ ಹಾಗೂ ಅಗಲವಾದ ಕರಿಯ ಬಣ್ಣದ ಬಾಲ, ನಸುಬಾಗಿರುವ ಬಲಯುತವಾದ ಕೊಕ್ಕು, ಉದ್ದವಾದ ಚೂಪಾದ ನಖಗಳು ಇದರ ಮುಖ್ಯ ಲಕ್ಷಣಗಳು. ಈ ಹಕ್ಕಿ ಚೆನ್ನಾಗಿ ಹಾರಲಾರದು. ಸಾಮಾನ್ಯವಾಗಿ ಇದು ನೆಲದ ಮೇಲೆ, ಪೊದೆಗಳ ಸಂದಿಯಲ್ಲಿ ಕೊಂಚ ದೂರ ಹಾರುತ್ತ ಕೊಂಚ ದೂರ ಕುಪ್ಪಳಿಸುತ್ತ ಸಾಗುತ್ತದೆ. ಕಂಬಳಿಹುಳು, ಕೀಟಗಳು, ಓತಿಗಳು, ಇಲಿಗಳು, ಹಕ್ಕಿಗಳ ಮೊಟ್ಟೆ ಹಾಗೂ ಮರಿಗಳು ಇದರ ಪ್ರಧಾನ ಆಹಾರ. ಕೆಂಬೂತ ನೆಲದ ಮೇಲೆ ಇಲ್ಲವೆ ಮುಳ್ಳುಕಂಟಿಯಲ್ಲಿ ದೊಡ್ಡ ಒರಟೊರಟಾದ ಗೂಡು ಕಟ್ಟುತ್ತದೆ. ಮೆತ್ತಗಿರಲೆಂದು ಹಸುರು ಎಲೆಗಳನ್ನು ಹರಡುತ್ತದೆ. ಗೂಡು ಕಟ್ಟುವ ಕಾಲ ಫೆಬ್ರವರಿಯಿಂದ ಸೆಪ್ಟೆಂಬರ್. ಮೊಟ್ಟೆಗಳ ಸಂಖ್ಯೆ 3-5. ಗಂಡು ಹೆಣ್ಣು ಹಕ್ಕಿಗಳೆರಡೂ ಕಾವು ಕೂತು ಮರಿಮಾಡುತ್ತವೆ.		

(ಹೆಚ್.ಎ.ಆರ್.)
										(ಪರಿಷ್ಕರಣೆ: ಕೆ ಎಸ್ ನವೀನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ